Home » ಭಾರತೀಯ ನ್ಯಾಯ ಸಂಹಿತೆಯ ಪ್ರಮುಖಾಂಶಗಳು

ಭಾರತೀಯ ನ್ಯಾಯ ಸಂಹಿತೆಯ ಪ್ರಮುಖಾಂಶಗಳು

by admin
1 comment

(Salient features of Bharatiya Nyaya Sanhita, 2023)

I.ರಚನಾತ್ಮಕ ಬದಲಾವಣೆಗಳು (Structural Changes)

  1. ಭಾರತೀಯ ದಂಡ ಸಂಹಿತೆ 1860 (The Indian Penal Code, 1860) ಕಾಯ್ದೆಯ ಬದಲಿಗೆ ಬಂದ ಹೊಸ ಕಾಯ್ದೆಯು, ಭಾರತೀಯ ನ್ಯಾಯ ಸಂಹಿತೆ 2023 (Bharatiya Nyaya Sanhita, 2023) ಎಂದು ಕರೆಯಲ್ಪಡುತ್ತದೆ.
  2. ಭಾರತೀಯ ದಂಡ ಸಂಹಿತೆ 1860 ಯಲ್ಲಿ ಒಟ್ಟು 511 ಕಲಂ ಗಳು ಇದ್ದವು. ಹೊಸ ಕಾಯ್ದೆಯಲ್ಲಿ ಕೇವಲ 358 ಕಲಂ ಗಳನ್ನು ಕಾಣಬಹುದು.
  3. ಅಪೂರ್ಣ ಅಪರಾಧಗಳಾದ ದುಷ್ಪ್ರೇರಣೆ(Abetment), ಅಪರಾಧಿಕ ಒಳಸಂಚು (Criminal Conspiracy) ಮತ್ತು ಯತ್ನ ವನ್ನು(Attempt) ಭಾರತೀಯ ನ್ಯಾಯ ಸಂಹಿತೆಯಲ್ಲಿ ಒಂದೇ ಅಧ್ಯಾಯದಡಿ(ಅಧ್ಯಾಯ-4)  ತರಲಾಗಿದೆ.  ಭಾರತೀಯ ದಂಡ ಸಂಹಿತೆಯಲ್ಲಿ ಇವುಗಳನ್ನು   ಬೇರೆ ಬೇರೆ ಅಧ್ಯಾಯಗಳಲ್ಲಿ  ಕೊಡಲಾಗಿತ್ತು.
  4. ಭಾರತೀಯ ದಂಡ ಸಂಹಿತೆಯಲ್ಲಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಒಂದೇ ಅಧ್ಯಾಯದಲ್ಲಿ ಕೊಡಲಾಗಿರಲಿಲ್ಲ. ಆದರೆ ಹೊಸ ಕಾಯ್ದೆಯಡಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಅಪರಾಧಗಳನ್ನು ಅಧ್ಯಾಯ-5 ರಲ್ಲಿ ಕ್ರೋಢಿಕರಿಸಲಾಗಿದೆ.

II.ವ್ಯಾಖ್ಯಾನಗಳಲ್ಲಿ ಬದಲಾವಣೆ (Changes in Definitions)

  1. ಮಕ್ಕಳು(Child) – ಎಂಬ ಶಬ್ದಕ್ಕೆ ಕಲಂ 2(3)  ಹೊಸ ವ್ಯಾಖ್ಯಾನ ಕೊಡಲಾಗಿದೆ. “ಮಗು” (Child) ಎಂಬ ಪದವನ್ನು ‘ಅಪ್ರಾಪ್ತ ವಯಸ್ಕ’ ( Minor) ಮತ್ತು ‘18 ವರ್ಷಕ್ಕೆ ಕಡಿಮೆ ವಯಸ್ಸಿನ ಮಗು’ (child under the age of 18 years) ಪದಗಳಿಗೆ ಬದಲಾಯಿಸಿಸುವುದರ ಮುಲಕ ‘ಮಗು’ ಪದಕ್ಕೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಏಕರೂಪತೆಯನ್ನು ತರಲಾಗಿದೆ.
  2. ಲಿಂಗ” (Gender) ದ ವ್ಯಾಖ್ಯಾನದಲ್ಲಿ ತೃತೀಯ ಲಿಂಗವನ್ನೂ ಸೇರಿಸಲಾಗಿದೆ.
  3. ಚರ ಆಸ್ತಿ”ಯ (Movable property) ಸಾಮಾನ್ಯ ವಿವರಣೆಯು ಈಗ ಮೂರ್ತ ಮತ್ತು ಅಮೂರ್ತ ವಸ್ತುಗಳೆರಡನ್ನೂ (tangible and intangible properties) ಒಳಗೊಳ್ಳುತ್ತದೆ. ಮುಂಚೆ ಮೂರ್ತ ವಸ್ತುಗಳಿಗಷ್ಟೆ ಈ ವ್ಯಾಖ್ಯಾನವು ಅನ್ವಯವಾಗುತ್ತಿತ್ತು.
  4. ದಾಖಲೆಪತ್ರ”ದ (Document) ಸಾಮನ್ಯ ವಿವರಣೆಯು ಈಗ ಇಲೆಕ್ಟ್ರಾನಿಕ್ ಮತ್ತು ದಿಜಿಟಲ್ ರೆಕಾರ್ಡ್ ಗಳನ್ನು ಒಳಗೊಳ್ಳುತ್ತದೆ.

III.ಹೊಸ ಕಾನೂನಿನಲ್ಲಿ ಸೇರ್ಪಡೆಯಾದ ಹೊಸ ಕಲಂ/ ಉಪಕಲಂಗಳು ( New Sections/ Sub sections)

  1. ಭಾರತದ ಹೊರಗಿರುವ ವ್ಯಕ್ತಿಯು, ಭಾರತದ ಒಳಗೆ ಹೊಸ ಅಪರಾಧವನ್ನು ಮಾಡಲು ಕೊಡುವ ದುಷ್ಪ್ರೇರಣೆಯು ಭಾರತೀಯ ನ್ಯಾಯ ಸಂಹಿತೆ ಸಂಹಿತೆಯ ಕಲಂ 48 ರಲ್ಲಿ ಹೊಸ ಅಪರಾಧವಾಗಿ ಸೇರ್ಪಡೆಯಾಗಿದೆ.
  2. ಭಾರತೀಯ ದಂಡ ಸಂಹಿತೆ,1860 ಯ ಕಲಂ 53, ಅಪರಾಧಿಗಳು ಗುರಿಯಾಗಬಹುದಾದ ಶಿಕ್ಷೆಗಳ ಬಗ್ಗೆ ಹೇಳುತ್ತದೆ. ಇದಕ್ಕೆ “ಸಮುದಾಯ ಸೇವೆ” (Community Service) ಎಂಬ ಹೊಸ ಶಿಕ್ಷೆಯನ್ನು ದಂಡನೆಯ ರೂಪದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 4 ರಲ್ಲಿ ಸೇರಿಸಲಾಗಿದೆ.
  3. ಮದುವೆಯಾಗುವ ಹುಸಿ ಭರವಸೆ ನೀಡಿ ಮಹಿಳೆಯೊಡನೆ ಲೈಂಗಿಕ ಸಂಬಂಧವನ್ನು ಹೊಂದುವುದು, ಭಾರತೀಯ ನ್ಯಾಯ ಸಂಹಿತೆಯ ಕಲಂ 69ರಡಿ  ಹೊಸ ಅಪರಾಧವಾಗಿ ಸೇರಿಸಲಾಗಿದೆ.
  4. ಅಪರಾಧವನ್ನು ಮಾಡಲು ಮಗುವೊಂದನ್ನು ಬಾಡಿಗೆ ಪಡೆಯುವುದು ಅಥವಾ ನೇಮಕ ಮಾಡುವುದು ಭಾರತೀಯ ನ್ಯಾಯ  ಸಂಹಿತೆಯ ಕಲಂ 95 ರಡಿ  ಹೊಸ ಅಪರಾಧವಾಗಿರುತ್ತದೆ.
  5. ಭಾರತೀಯ ನ್ಯಾಯ ಸಂಹಿತೆಯ ಕಲಂ 103(2) “ಗುಂಪು ಹತ್ಯೆ” (Mob lynching) ಎನಿಸಿಕೊಳ್ಳುವ ಅಪರಾಧವನ್ನು ಸೇರಿಸಲಾಗಿದೆ. ಜನಾಂಗ, ಕೋಮು, ಸಮುದಾಯ ,ಲಿಂಗ ಹುಟ್ಟಿದ ಸ್ಥಳ, ಭಾಷೆ, ವೈಯುಕ್ತಿಕ ನಂಬಿಕೆ ಅಥವಾ ಅಂತಹ ಯಾವುದೇ ಕಾರಣಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರಿ ಕೊಲೆ ಮಾಡಿದರೆ ಅದು ಸೆಕ್ಷನ್ 103(2) ರಡಿ ಶಿಕ್ಷೆಗೆ ಗುರಿಯಾಗುತ್ತಾನೆ.
  6. ಅಲಕ್ಷ್ಯ ಅಥವಾ ದುಡುಕಿನಿಂದ ವಾಹನ ಚಲಾಯಿಸುವುದರ ಪರಿಣಾಮವಾಗಿ ಒಬ್ಬ ವ್ಯಕ್ತಿಯ ಸಾವುಂಟಾದಾಗ ಅದನ್ನು ಕೂಡಲೇ ಪೊಲೀಸ್ ಠಾಣೆಯ ಅಧಿಕಾರಿಗೆ ಅಥವಾ ದಂಡಾಧಿಕಾರಿಗಳಿಗೆ (Magistrate) ವರದಿ ಮಾಡದೆ ತಪ್ಪಿಸಿಕೊಂಡರೆ ಅವನು ಭಾರತೀಯ ನ್ಯಾಯ ಸಂಹಿತೆ ಯ ಕಲಂ 106(2) ರಲ್ಲಿ ಶಿಕ್ಷಾರ್ಹನಾಗಿರುತ್ತಾನೆ. ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗಿರುವ “ಹಿಟ್ ಅಂಡ್ ರನ್” ಪ್ರಕರಣಗಳನ್ನು ಉದ್ದೇಶಿಸಿ ಈ ಉಪಬಂಧವನ್ನು ಸೇರಿಸಲಾಗಿದೆ.
  7. ಭಾರತೀಯ ನ್ಯಾಯ ಸಂಹಿತೆಯಲ್ಲಿ ಹೊಸದಾಗಿ ಕಲಂ 111 ಮತ್ತು 113ನ್ನು ಸೇರಿಸಲಾಗಿದೆ. ಇವು ವ್ಯವಸ್ಥಿತ ಅಪರಾಧ(Organised Crime) ಮತ್ತು ಭಯೋತ್ಪಾದಕ ಕೃತ್ಯ( Terrorist Act) ಕ್ಕೆ ಸಂಬಂಧಿತವಾಗಿದೆ. ವ್ಯವಸ್ಥಿತ ಅಪರಾಧಕ್ಕೆ ಸಂಬಂಧಿಸಿ ರಚಿಸಿದಂಥ ವಿವಿಧ ರಾಜ್ಯ ಕಾನೂನುಗಳಿಗೆ ಹಾಗೂ ಕಲಂ 112 ಕಾನೂನು ಬಾಹಿರ ಚಟುವಟಿಕೆ ( ಪ್ರತಿಬಂಧ) ಅಧಿನಿಯಮ, 1967 (UAPA) ಕಾನೂನಿಗೆ ಅನುಗುಣವಾಗಿದೆ.
  8. ತೀವ್ರ ಸ್ವರೂಪದ ಗಾಯದಿಂದ ವ್ಯಕ್ತಿಯ ಖಾಯಂ ದೌರ್ಬಲ್ಯ ಉಂಟಾದರೆ ಅಥವಾ ಸತತವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿರುವಂತಾದರೆ ಹಾಗೆ ತೀವ್ರ ಗಾಯಗೊಳಿಸಿದ ವ್ಯಕ್ತಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಹೊಸದಾಗಿ ಕಲಂ 117 ರಲ್ಲಿ ಉಪಕಲಂ (3) ಅನ್ನು ಸೇರಿಸಲಾಗಿದೆ.
  9. ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಪ್ರವೃತ್ತಿಯನ್ನು ಹೊಂದಿರುವ ಸುಳ್ಳು ಅಥವಾ ದಾರಿ ತಪ್ಪಿಸುವ ಮಾಹಿತಿಗಳನ್ನು ನೀಡುವುದು ಅಥವಾ ಪ್ರಕಟಿಸುವುದು ಹೊಸದಾಗಿ ಭಾರತೀಯ ನ್ಯಾಯ ಸಂಹಿತೆಯ ಕಲಂ 197(1)(d) ರಡಿ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಗೃಹವಾಸ  ಅಥವಾ ಜುಲ್ಮಾನೆ ಅಥವಾ ಎರಡರಿಂದಲೂ ದಂಡಿಸಬಹುದಾಗಿದೆ.
  10. ಒಂದು ಚಲನಶೀಲ ವಸ್ತುವನ್ನು (movable property) ಹಠಾತ್ತನೆ ಕಿತ್ತುಕೊಳ್ಳುವುದು ಅಥವಾ ವಶಕ್ಕೆ ಪಡೆದುಕೊಳ್ಳುವುದು ಭಾರತೀಯ ನ್ಯಾಯ ಸಂಹಿತೆಯ ಕಲಂ 340 ರಡಿ “ಕಸಿದುಕೊಳ್ಳುವುದು” (Snatching) ಎಂಬ ಹೊಸ ಅಪರಾಧವಾಗುತ್ತದೆ. ಐ.ಪಿ.ಸಿ ಯಲ್ಲಿ ಹೀಗೆ ಕಸಿದುಕೊಳ್ಳುವುದಕ್ಕೆ ನಿರ್ದಿಷ್ಟ ಅಪರಾಧದ ಹೆಸರಿರಲಿಲ್ಲ . ಅದನ್ನು ಕಳ್ಳತನ ಅಥವಾ ಸುಲಿಗೆ ಎಂದು ಪರಿಗಣಿಸಬೇಕಿತ್ತು.

IV.ಹೊಸ ಕಾನೂನಿನಲ್ಲಿ ಆದ ಬದಲಾವಣೆಗಳು ( Modifications )

  1. ಮುಂಚೆ 16 ವರ್ಷದೊಳಗಿನ ಹುಡುಗಿಯ ಮೇಲೆ ಮಾಡಿದ  ಸಾಮೂಹಿಕ ಅತ್ಯಾಚಾರಕ್ಕೆ, ಐ.ಪಿ.ಸಿಯ  ಕಲಂ 376DA ಯಲ್ಲಿ ಶಿಕ್ಷೆಯನ್ನು ಕೊಡಲಾಗಿತ್ತು ಮತ್ತು 12 ವರ್ಷದೊಳಗಿನ ಹುಡುಗಿಯ ಮೇಲೆ ಮಾಡಿದ  ಸಾಮೂಹಿಕ ಅತ್ಯಾಚಾರಕ್ಕೆ ಐಪಿಸಿಯ ಕಲಂ 376DBಯಲ್ಲಿ ಕೊಡಲಾಗಿತ್ತು.
    ಭಾರತೀಯ ನ್ಯಾಯ ಸಂಹಿತೆ ಯ ಕಲಂ 70(2)ರಲ್ಲಿ 16/12 ವರ್ಷಗಳ ಬದಲಿಗೆ 18 ವರ್ಷದೊಳಗಿನ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರೆ ವಿಧಿಸಬಹುದಾದ ಶಿಕ್ಷೆ ಯನ್ನು ಕೊಡಲಾಗಿದೆ.
  2. ಭಾರತೀಯ ದಂಡ ಸಂಹಿತೆಯ  ಕಲಂ 354B ಮತ್ತು ಕಲಂ 354C ಅಲ್ಲಿ ಬರುವಂತಹ ಅಪರಾಧಗಳಾದ “ಮಹಿಳೆಯ ಮೇಲೆ ಅತ್ಯಾಚಾರವೆಸಗುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ಅಥವಾ ಆಪರಾಧಿಕ ಬಲಪ್ರಯೋಗ”(Assault or use of criminal force to woman with intent to outrage her modesty) ಮತ್ತು” “ಇಣುಕಿ ನೋಡುವುದು”(Voyeurism)ಗೆ  ಕೇವಲ ಪುರುಷರು ಮಾತ್ರ ಶಿಕ್ಷಾರ್ಹರಾಗಿದ್ದರು. ಈಗ ಭಾರತೀಯ ನ್ಯಾಯ ಸಂಹಿತೆಯ ಕಲಂ 76 ಮತ್ತು  77 ರಲ್ಲಿ ಈ ಅಪರಾಧಗಳನ್ನು ಮಹಿಳೆ ಅಥವಾ ಪುರುಷರಲ್ಲಿ ಯಾರು ಮಾಡಿದರು ಅವರು ಶಿಕ್ಷಾರ್ಹರಾಗಿರುತ್ತಾರೆ.
  3. ಐ.ಪಿ.ಸಿಯಲ್ಲಿ ಕಲಂ 366 ಬಿ ಯಲ್ಲಿ 21 ವರ್ಷದೊಳಗಿನ ಮಹಿಳೆಯನ್ನು ಬೇರೆ ಒಬ್ಬೊಡನೆ ಅನೈತಿಕ ಲೈಂಗಿಕ ವ್ಯವಹಾರದಲ್ಲಿ ತೊಡಗಿಸುವ ಉದ್ದೇಶದಿಂದ ಆಮದು ಮಾಡಿದರೆ ಶಿಕ್ಷಾರ್ಹವಾಗಿತ್ತು. ಭಾರತೀಯ ನ್ಯಾಯ ಸಂಹಿತೆಯಲ್ಲಿ 21 ವರ್ಷದೊಳಗಿನ ಹುಡುಗಿ ಮಾತ್ರವಲ್ಲದೆ 21 ವರ್ಷದೊಳಗಿನ ಹುಡುಗನನ್ನೂ ಸಹ ಮೇಲೆ ಹೇಳಿದ ಉದ್ದೇಶದಿಂದ ಆಮದು ಮಾಡಿಕೊಳ್ಳುವುದು ಕಲಂ 141 ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ.
  4. ಭಿಕ್ಷಾಟನೆ”ಯನ್ನು(Beggary) ದುರ್ವ್ಯಾಪಾರಕ್ಕಾಗಿ (trafficking) ಮಾಡುವ ಶೋಷಣೆಯ ಒಂದು ರೂಪ ವಾಗಿ ಪರಿಚಯಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ, 2023 ರ ಕಲಂ 143 ರಲ್ಲಿ ಶಿಕ್ಷಾರ್ಹವಾಗಿದೆ.
  5. ಭಾರತೀಯ ದಂಡ ಸಂಹಿತೆಯ ಕಲಂ 124A ನಲ್ಲಿ ಅಪರಾಧವೆನಿಸುವ “ರಾಜದ್ರೋಹ”ವನ್ನು (Sedition) ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೈ ಬಿಡಲಾಗಿದೆ. ಈ ಕಲಂನ ದುರುಪಯೋಗವನ್ನು ತಪ್ಪಿಸಲು ಮತ್ತು ಮೂಲಭೂತ ಹಕ್ಕುಗಳಲ್ಲೊಂದಾದ “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು” ಎತ್ತಿಹಿಡಿಯಲು ಈ ಕಲಂ ಅನ್ನು  ತೆಗೆದು ಹಾಕಲಾಗಿದೆ.
  6. ಸಶಸ್ತ್ರ ಬಂಡಾಯ, ವಿಧ್ವೌಂಸಕ ಕೃತ್ಯ ,   ಪ್ರತ್ಯೇಕತಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಮತ್ತು ಭಾರತದ ಏಕತೆ ,ಸಾರ್ವಭೌಮತೆ ಮತ್ತು ಘನತೆಯನ್ನು ಅಪಾಯಕ್ಕೀಡು ಮಾಡುವ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆಯಲ ಹೊಸದಾದ ಕಲಂ 152 ರಲ್ಲಿ ಶಿಕ್ಷಾರ್ಹವಾಗಿರುತ್ತದೆ.
  7. ಆತ್ಮಹತ್ಯಾ ಪ್ರಯತ್ನ” ಭಾರತೀಯ ದಂಡ ಸಂಹಿತೆಯ  ಕಲಂ 309 ರಲ್ಲಿ ಶಿಕ್ಷಾರ್ಹ ವಾಗಿತ್ತು. ಭಾರತೀಯ ನ್ಯಾಯ ಸಂಹಿತೆಯಲ್ಲಿ ಇದನ್ನು ಕೈ ಬಿಡಲಾಗಿದೆ. ಆದರೆ “ಕಾನೂನು ಸಮ್ಮತ ಅಧಿಕಾರವನ್ನು ಚಲಾಯಿಸುವಂತೆ ಒತ್ತಾಯಿಸಲು ಅಥವಾ ಅಧಿಕಾರವನ್ನು ಚಲಾಯಿಸದಂತೆ ತಡೆಯಲು ಮಾಡುವ ಆತ್ಮಹತ್ಯೆ ಯತ್ನವು” ಹೊಸ ಕಾನೂನಿನ ಕಲಂ 226 ರಲ್ಲಿ ಶಿಕ್ಷೆಯನ್ನು ವಿಧಿಸಲಾಗಿದೆ.
  8. ಭಾರತೀಯ ನ್ಯಾಯ ಸಂಹಿತೆಯ ಕಲಂ 324ರಲ್ಲಿ ಬರುವ “ಕಿಡಿಗೇಡಿತನ” (Mischief) ಅಪರಾಧದ ವ್ಯಾಪ್ತಿಯಲ್ಲಿ, ಸರ್ಕಾರಿ ಆಸ್ತಿ ಮತ್ತು ಸ್ಥಳೀಯ ಪ್ರಾಧಿಕಾರದ ಆಸ್ತಿಗೆ ಮಾಡುವ ನಷ್ಟಗಳು ಈಗ ಒಳಗೊಳ್ಳುತ್ತದೆ.
  9. ಒಂದು ಗಾಯ “ತೀವ್ರ ಗಾಯ”ವೆಂದು(grievous hurt) ಕರೆಯಲ್ಪಡಲು ಗಾಯಾಳುವು ಇಪ್ಪತ್ತು ದಿನಗಳವರೆಗಿನ ತೀವ್ರವಾದ ದೈಹಿಕ ನೋವನ್ನು ಅನುಭವಿಸಿರಬೇಕಿತ್ತು. ಭಾರತೀಯ ನ್ಯಾಯ ಸಂಹಿತೆಯ ಕಲಂ 116 ರಲ್ಲಿ ಈ ಅವಧಿಯನ್ನು ಹದಿನೈದು ದಿನಗಳಿಗೆ ಇಳಿಸಲಾಗಿದೆ.
  10. ಹಲವು ಕಡೆಗಳಲ್ಲಿ ಪುರಾತನ ಶಬ್ದಗಳಾದ Lunatic (ಹುಚ್ಚ), insane(ಅಸ್ವಸ್ಥ ಮನಸ್ಸಿನ ವ್ಯಕ್ತಿ), idiot (ಹುಟ್ಟು ದಡ್ಡ) ಇವುಗಳನ್ನು ತೆಗೆದುಹಾಕಲಾಗಿದೆ. ವಸಾಹತುಶಾಹಿ ಅವಶೇಷಗಳಾದ ‘British calendar’, ‘Queen’, ‘British India, ‘Justice of the peace’ ಪದಗಳನ್ನು ತೆಗೆದುಹಾಕಲಾಗಿದೆ.
  11. ಭಾರತೀಯ ದಂಡ ಸಂಹಿತೆಯಲ್ಲಿದ್ದ ಜುಲ್ಮಾನೆಯು ಅತ್ಯಂತ ಕಡಿಮೆಯಾಗಿದ್ದು, ರೂ 10 ರಿಂದ ರೂ.1000 ರವರೆಗೆ ಇದ್ದವು. ಹಾಗಾಗಿ 33 ಅಪರಾಧಗಳಿಗೆ ಕಾರವಾಸದ ಅವಧಿಯನ್ನು ಹೆಚ್ಚಿಸಲಾಗಿದೆ , 83 ಪ್ರಕರಣಗಳಿಗೆ ಜುಲ್ಮಾನೆಗಳನ್ನು ಏರಿಸಲಾಗಿದೆ ಮತ್ತು 23 ಅಪರಾಧಗಳಿಗೆ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

You may also like

1 comment

ಶಮಂತ ಕುಮಾರ್ December 16, 2024 - 7:54 am

ಸಾಗರವಾಗಲಿ ಸಾಕ್ಷರತೆ,:
ಕಾನೂನು ಜ್ಞಾನ ಮತ್ತು ಮಾಹಿತಿ ಭಂಡಾರ ನಿಮ್ಮ ಈ ಕಾರ್ಯ ಶ್ಲಾಘನೀಯ ಎಷ್ಟೋ ಬಡ ಕಾನೂನು ವಿದ್ಯಾರ್ಥಿಗಳಿಗೆ ಕಿರಿಯ ವಕೀಲರಿಗೆ ಸಹಾಯಕವಾಗಿದೆ ಅದರಲ್ಲೂ ವಿಶೇಷವಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿ ವಕೀಲರಿಗೆ ವರದಾನ ಈ ನಿಮ್ಮ ಶ್ರಮ ಸಮಾಜಕ್ಕೆ ಕಾಣಿಕೆ ಕೊಡುಗೆ ಎಂದು ಭಾವಿಸಬಹುದು ನಾವೆಲ್ಲರೂ ಆಭಾರಿಗಳಾಗಿದ್ದೇವೆ. ನಿಮ್ಮ ಕಾರ್ಯ ನಿರಂತರವಾಗಿ ಸಾಗಲಿ .

Reply

Leave a Comment

Abhijna Law Series

Abhijna Law Series delivers reliable legal news, educational content, and articles in English and Kannada. We aim to make legal knowledge accessible to all, providing insights for professionals, students, and the general public to navigate the legal landscape with confidence. Read More »
Copyright © Abhijna Law Series. All Right Reserved. Designed by Sabweb.in
Message Us on WhatsApp